18
ಅಬ್ರಹಾಮನಿಗೆ ದೇವರು ಕೊಟ್ಟ ವಾಗ್ದಾನ

1 ಅಬ್ರಹಾಮನು ಬಿಸಿಲೇರಿದಾಗ ಮಮ್ರೆಯ ಮೋರೆ ತೋಪಿನ ತನ್ನ ಗುಡಾರದ ಬಾಗಿಲಲ್ಲಿ ಕುಳಿತಿರುವಾಗ ಯೆಹೋವನು ಅವನಿಗೆ ಪ್ರತ್ಯಕ್ಷನಾದನು. 2 ಹೇಗೆಂದರೆ, ಅಬ್ರಹಾಮನು ಕಣ್ಣೆತ್ತಿ ನೋಡಲು ಅವನೆದುರಿನಲ್ಲಿ ಮೂವರು ಪುರುಷರು ನಿಂತಿದ್ದರು. ಕೂಡಲೆ ಅವರನ್ನು ಎದುರುಗೊಳ್ಳುವುದಕ್ಕೆ ಅವನು ಗುಡಾರದ ಬಾಗಿಲಿನಿಂದ ಓಡಿ ಹೋಗಿ ತಲೆಬಾಗಿ ನಮಸ್ಕರಿಸಿ,

3 <<ಕರ್ತನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರೆತಿದ್ದರೆ; ದಾಸನ ಗುಡಾರಕ್ಕೆ ದಯಮಾಡದೆ ಮುಂದೆ ಹೋಗಬೇಡಿರಿ. ನೀವು ದಾಸನಿರುವ ಸ್ಥಳದ ಹತ್ತಿರ ಹಾದು ಹೋಗುತ್ತೀರಲ್ಲಾ. 4 ನೀರು ತರಿಸಿಕೊಡುತ್ತೇನೆ; ನಿಮ್ಮ ಕಾಲುಗಳನ್ನು ತೊಳೆದುಕೊಂಡು ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿರಿ. 5 ಸ್ವಲ್ಪ ಆಹಾರ ತರುತ್ತೇನೆ, ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಮಾಡಬಹುದು>> ಎನ್ನಲು ಅವರು, <<ನೀನು ಹೇಳಿದಂತೆ ಮಾಡಬಹುದು>> ಅಂದರು.

6 ಆಗ ಅಬ್ರಹಾಮನು ಗುಡಾರದಲ್ಲಿದ್ದ ಸಾರಳ ಬಳಿಗೆ ಓಡಿಹೋಗಿ ಆಕೆಗೆ, <<ಹಸನಾದ 1 ಮೂರು ಸೇರು ಹಿಟ್ಟನ್ನು ನಾದಿ ಬೇಗ ರೊಟ್ಟಿಗಳನ್ನು ಮಾಡು>> ಎಂದು ಹೇಳಿದನು.

7 ಆ ಮೇಲೆ ಅವನು ದನಗಳ ಕಡೆಗೆ ಓಡಿಹೋಗಿ ಕೊಬ್ಬಿದ ಎಳೇ ಕರುವನ್ನು ತೆಗೆದು ಆಳಿನ ಕೈಗೆ ಕೊಟ್ಟನು. 8 ಆಳು ಬೇಗನೆ ಕೊಬ್ಬಿದ ಕರುವನ್ನು ಕಡಿದು, ಅಡಿಗೆ ಮಾಡಿದನು. ತರುವಾಯ ಅಬ್ರಹಾಮನು ಹಾಲು ಮೊಸರನ್ನೂ ಅಡಿಗೆ ಮಾಡಿದ ಮಾಂಸವನ್ನೂ ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಅವರು ಮರದ ಕೆಳಗೆ ಕುಳಿತು ಊಟ ಮಾಡುವವರೆಗೂ ಅವನು ಹತ್ತಿರ ನಿಂತು ಅವರಿಗೆ ಉಪಚಾರ ಮಾಡಿದನು.

9 ಬಳಿಕ ಅವರು ಅವನಿಗೆ, <<ನಿನ್ನ ಪತ್ನಿಯಾದ ಸಾರಳು ಎಲ್ಲಿದ್ದಾಳೆ>> ಎಂದು ಕೇಳಲು ಅವನು <<ಅಗೋ, ಗುಡಾರದಲ್ಲಿದ್ದಾಳೆ>> ಎಂದನು.

10 ಅದಕ್ಕೆ 2 ಆತನು, <<ಬರುವ ವರ್ಷ ಇದೇ ವೇಳೆಗೆ ನಾನು ತಪ್ಪದೆ ತಿರುಗಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಪತ್ನಿಯಾದ ಸಾರಳಿಗೆ ಮಗನಿರುವನು>> ಎಂದನು. ಆ ಮಾತು ಹಿಂದೆ ಗುಡಾರದ ಬಾಗಿಲಲ್ಲಿ ನಿಂತಿದ್ದ ಸಾರಳ ಕಿವಿಗೆ ಬಿತ್ತು. 11 ಅಬ್ರಹಾಮನೂ ಸಾರಳೂ ಬಹುವೃದ್ಧರಾಗಿದ್ದರು; ಸಾರಳಿಗೆ ಮುಟ್ಟು ನಿಂತು ಹೋಗಿತ್ತು. 12 ಹೀಗಿರಲಾಗಿ ಸಾರಳು, <<ನನ್ನಂಥ ಮುದುಕಿಗೆ ಭೋಗವಾದೀತೇ?>> ನನ್ನ ಯಜಮಾನನೂ ಮುದುಕನಲ್ಲವೇ ಎಂದು ತನ್ನೊಳಗೆ ನಕ್ಕಳು.

13 ಯೆಹೋವನು ಅಬ್ರಹಾಮನಿಗೆ, <<ಸಾರಳು ನಕ್ಕು, ಮುದುಕಿಯಾದ, ನಾನು ಮಗುವನ್ನು ಹೆರುವುದಾದೀತೇ ಎಂದು ಹೇಳಿದ್ದೇನು? 14 ಯೆಹೋವನಿಗೆ ಅಸಾಧ್ಯವಾದದ್ದುಂಟೋ? ನಾನು ಹೇಳಿದಂತೆಯೇ ಬರುವ ವರ್ಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುವನು>> ಎಂದು ಹೇಳಿದನು.

15 ಆಗ ಸಾರಳು ಭಯಪಟ್ಟು, <<ನಾನು ನಗಲಿಲ್ಲ>> ಎಂದು ಸುಳ್ಳಾಡಿದಾಗ, ಆತನು ಅದಕ್ಕೆ, <<ಹಾಗಲ್ಲ, ನೀನು ನಕ್ಕಿದ್ದುಂಟು>> ಎಂದನು.
ಸೊದೋಮ್ ಪಟ್ಟಣಕ್ಕಾಗಿ ಅಬ್ರಹಾಮನ ವಿಜ್ಞಾಪನೆ

16 ತರುವಾಯ ಆ ಮನುಷ್ಯರು ಅಲ್ಲಿಂದ ಹೊರಟು ಸೊದೋಮಿನ ಕಡೆಗೆ ನೋಡಿದರು. ಅಬ್ರಹಾಮನು ಅವರನ್ನು ಕಳುಹಿಸಿಕೊಡಲು ಅವರ ಜೊತೆಯಲ್ಲೇ ಹೋದನು. 17 ಆಗ ಯೆಹೋವನು ತನ್ನೊಳಗೆ, <<ನಾನು ಮಾಡಬೇಕೆಂದಿರುವ ಕಾರ್ಯವನ್ನು ಅಬ್ರಹಾಮನಿಗೆ ಮರೆಮಾಡುವುದು ಸರಿಯೋ? 18 ಅವನಿಂದ ಬಲಿಷ್ಠವಾದ ಮಹಾ ಜನಾಂಗವು ಹುಟ್ಟಬೇಕಲ್ಲಾ; ಅವನ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದಲ್ಲಾ; 19 ಅವನು ತನ್ನ ಮಕ್ಕಳಿಗೂ ಮನೆಯವರಿಗೂ ನ್ಯಾಯ ನೀತಿಗಳನ್ನು ತಿಳಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸುವಂತೆ ಅವನನ್ನು ನಾನು ಆರಿಸಿಕೊಂಡೆನಲ್ಲಾ; ಅವನು ಹೀಗೆ ಮಾಡುವುದರಿಂದ ಯೆಹೋವನಾದ ನನ್ನ ವಾಗ್ದಾನವು ನೆರವೇರುವುದು>> ಅಂದುಕೊಂಡನು.

20 ಇದಲ್ಲದೆ ಯೆಹೋವನು, <<ಸೊದೋಮ್ ಗೊಮೋರಗಳ ದೊಡ್ಡ ಮೊರೆ ನನಗೆ ಮುಟ್ಟಿತು; ಆ ಊರಿನವರ ಮೇಲೆ ಹೊರಿಸಿರುವ ಪಾಪವು ಎಷ್ಟೋ ಘೋರವಾದದ್ದು, 21 ನಾನು ಇಳಿದು ಹೋಗಿ, ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿರುವರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ>> ಎಂದನು.

22 ಆ ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು; ಆದರೆ ಅಬ್ರಹಾಮನು ಯೆಹೋವನಿಗೆ ಎದುರಾಗಿ ಇನ್ನೂ ನಿಂತುಕೊಂಡಿದ್ದನು.

23 ಆಗ ಅಬ್ರಹಾಮನು ಹತ್ತಿರಕ್ಕೆ ಬಂದು, <<ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ? 24 ಒಂದು ವೇಳೆ ಆ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರಿದ್ದಾರು; ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯಾ? 25 ಆ ರೀತಿಯಾಗಿ ದುಷ್ಟರಿಗೂ ಶಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವುದು ನಿನ್ನಿಂದ ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ>> ಎಂದು ಹೇಳಲು.

26 ಯೆಹೋವನು, <<ಸೊದೋಮನಲ್ಲಿ ಐವತ್ತು ಮಂದಿ ನೀತಿವಂತರು ನನಗೆ ಸಿಕ್ಕಿದರೆ ಅವರ ನಿಮಿತ್ತ ಪಟ್ಟಣವನ್ನೆಲ್ಲಾ ಉಳಿಸುವೆನು>> ಎಂದನು.

27 ಅದಕ್ಕೆ ಅಬ್ರಹಾಮನು, <<ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ; 28 ಒಂದು ವೇಳೆ ಐವತ್ತು ಮಂದಿ ನೀತಿವಂತರಲ್ಲಿ ಐದು ಮಂದಿ ಕಡಿಮೆ ಇದ್ದರೆ ಪಟ್ಟಣವನ್ನೆಲ್ಲಾ ನಾಶ ಮಾಡುವಿಯಾ?>> ಎಂದು ಕೇಳಲು ಯೆಹೋವನು, <<ಅಲ್ಲಿ ನಲ್ವತ್ತೈದು ಮಂದಿ ನೀತಿವಂತರು ಸಿಕ್ಕಿದರೆ ಅದನ್ನು ನಾಶ ಮಾಡುವುದಿಲ್ಲ>> ಅಂದನು.

29 ಅಬ್ರಹಾಮನು ಆತನ ಸಂಗಡ ಇನ್ನೂ ಮಾತನಾಡಿ, <<ಒಂದು ವೇಳೆ ಅಲ್ಲಿ ನಲ್ವತ್ತು ಮಂದಿ ಸಿಕ್ಕಾರು>> ಎನ್ನಲು ಆತನು, <<ನಲ್ವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶ ಮಾಡುವುದಿಲ್ಲ>> ಎಂದನು.

30 ಅಬ್ರಹಾಮನು, <<ಕರ್ತನೇ, ಕೋಪಮಾಡಬಾರದು; ಇನ್ನೂ ಮಾತನಾಡುತ್ತೇನೆ; ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು>> ಎನ್ನಲು ಆತನು, <<ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ ಅದನ್ನು ನಾಶ ಮಾಡುವುದಿಲ್ಲ>> ಅಂದನು.

31 ಅವನು, <<ಇಗೋ, ಸ್ವಾಮಿಯ ಸಂಗಡ ಮಾತನಾಡುವುದಕ್ಕೆ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತು ಮಂದಿ ಅಲ್ಲಿ ಸಿಕ್ಕಾರು>> ಎನ್ನಲು ಆತನು, <<ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಆ ಪಟ್ಟಣವನ್ನು ಉಳಿಸುವೆನು, ನಾಶ ಮಾಡುವುದಿಲ್ಲ>> ಅಂದನು.

32 ಅಬ್ರಹಾಮನು, <<ಕರ್ತನೇ, ಸಿಟ್ಟಾಗಬಾರದು; ಇನ್ನು ಒಂದೇ ಸಾರಿ ಮಾತನಾಡುತ್ತೇನೆ; ಒಂದು ವೇಳೆ ಹತ್ತು ಮಂದಿ ಸಿಕ್ಕಾರು>> ಎನ್ನಲು ಆತನು, <<ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುವೆನು, ನಾಶ ಮಾಡುವುದಿಲ್ಲ.>> ಎಂದನು.

33 ಯೆಹೋವನು ಅಬ್ರಹಾಮನ ಸಂಗಡ ಮಾತನಾಡುವುದನ್ನು ನಿಲ್ಲಿಸಿ ಅಲ್ಲಿಂದ ಹೊರಟು ಹೋದನು; ಅಬ್ರಹಾಮನು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.


1 18:6 ಸುಮಾರು 21 ಕಿಲೋಗ್ರಾಂ.
2 18:10 ಯೆಹೋವನು.