16
ಇಷ್ಮಾಯೇಲನ ಜನನ
1
ಅಬ್ರಾಮನ ಹೆಂಡತಿಯಾದ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಐಗುಪ್ತ ದೇಶದವಳಾದ ಹಾಗರಳೆಂಬ ದಾಸಿಯಿದ್ದಳು.
2
ಹೀಗಿರಲಾಗಿ ಸಾರಯಳು ಅಬ್ರಾಮನಿಗೆ, <<ಯೆಹೋವನು ನನಗೆ ಮಕ್ಕಳನ್ನು ಕೊಡಲಿಲ್ಲವಲ್ಲಾ; ನೀನು ನನ್ನ ದಾಸಿಯಾದ ಹಾಗರಳ ಬಳಿಗೆ ಹೋಗಬೇಕು; ಒಂದು ವೇಳೆ ಅವಳ ಮೂಲಕ ನನಗೆ ಸಂತಾನವಾದೀತು>> ಎಂದು ಹೇಳಲು ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಸಿದನು.
3
ಅಬ್ರಾಮನು ಹತ್ತು ವರ್ಷಗಳ ಕಾಲ ಕಾನಾನ್ ದೇಶದಲ್ಲಿ ವಾಸಿಸಿದ ಮೇಲೆ ಅವನ ಹೆಂಡತಿಯಾದ ಸಾರಯಳು ಐಗುಪ್ತಳಾದ ಹಾಗರಳೆಂಬ ದಾಸಿಯನ್ನು ಕರೆದು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು.
4
ಅವನು ಹಾಗರಳನ್ನು ಸಂಗಮಿಸಲು ಆಕೆಯು ಬಸುರಾದಳು. ತಾನು ಬಸುರಾದೆನೆಂದು ತಿಳಿದುಕೊಂಡಾಗ ಅವಳು ತನ್ನ ಯಜಮಾನಿಯನ್ನು ತಾತ್ಸಾರ ಮಾಡತೊಡಗಿದಳು.
5
ಆಗ ಸಾರಯಳು ಅಬ್ರಾಮನಿಗೆ, <<ನನ್ನ ಗೋಳು ನಿನಗೆ ತಟ್ಟಲಿ; ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಒಪ್ಪಿಸಿದೆನಷ್ಟೆ; ಅವಳು ತಾನು ಬಸುರಾದೆನೆಂದು ತಿಳಿದು ನನ್ನನ್ನು ತಾತ್ಸಾರಮಾಡುತ್ತಿದ್ದಾಳೆ; ನಿನಗೂ ನನಗೂ ನಡುವೆ ಯೆಹೋವನೇ ನ್ಯಾಯತೀರಿಸಲಿ>> ಎಂದು ಹೇಳಿದಳು.
6
ಆಗ ಅಬ್ರಾಮನು, <<ನಿನ್ನ ದಾಸಿಯು ನಿನ್ನ ಕೈಯಲ್ಲೇ ಇದ್ದಾಳಲ್ಲಾ; ನಿನ್ನಗೆ ಮನಸ್ಸು ಬಂದಂತೆ ಮಾಡು>> ಎಂದನು. ಆಗ ಸಾರಯಳು ಅವಳನ್ನು ಬಾಧಿಸಲು ಅವಳು ಓಡಿಹೋದಳು.
7
ಅವಳು ಮರಳುಗಾಡಿನಲ್ಲಿ ಶೂರಿನ ಮಾರ್ಗದ ನೀರಿನ ಬುಗ್ಗೆಯ ಹತ್ತಿರ ಇರುವಾಗ ಯೆಹೋವನ ದೂತನು ಅವಳನ್ನು ಕಂಡು,
8
<<ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದಿ? ಎಲ್ಲಿಗೆ ಹೋಗುತ್ತೀ?>> ಎಂದು ಕೇಳಲು ಅವಳು, <<ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಾ ಇದ್ದೇನೆ>> ಎಂದಳು.
9
ಅದಕ್ಕೆ ಯೆಹೋವನ ದೂತನು, <<ನೀನು ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಅವಳಿಗೆ ಅಧೀನಳಾಗಿ ನಡೆದುಕೋ>> ಎಂದನು.
10
ಅದಲ್ಲದೆ ಯೆಹೋವನ ದೂತನು ಅವಳಿಗೆ, <<ನಿನಗೆ ಬಹುಸಂತಾನವಾಗುವಂತೆ ಮಾಡುವೆನು; ನಿನ್ನ ಸಂತತಿಯು ಲೆಕ್ಕಿಸಲಾಗದಷ್ಟು ಹೆಚ್ಚಾಗುವುದು>> ಎಂದು ಹೇಳಿದನು.
11
ಯೆಹೋವನ ದೂತನು ಅವಳಿಗೆ, <<ನೀನು ಗರ್ಭಿಣಿಯಾಗಿದಿಯಾ; ನಿನಗೆ ಮಗನು ಹುಟ್ಟುವನು; ಯೆಹೋವನು ನಿನ್ನ ಕಷ್ಟದ ಕೂಗಿಗೆ ಕಿವಿಗೊಟ್ಟಿದ್ದರಿಂದ ಆ ಮಗನಿಗೆ
ಇಷ್ಮಾಯೇಲ್ ಎಂದು ಹೆಸರಿಡಬೇಕು.
12
ಆ ಮನುಷ್ಯ ಕಾಡು ಕತ್ತೆಯಂತೆ ಇರುವನು. ಅವನು ಎಲ್ಲರ ಮೇಲೆ ಕೈಯೆತ್ತುವನು; ಹಾಗೆಯೇ ಅವನ ಮೇಲೆ ಎಲ್ಲರೂ ಕೈಯೆತ್ತುವರು. ತನ್ನ ಅಣ್ಣತಮ್ಮಂದಿರಿಗೆ
ಎದುರಾಗಿ ವಾಸವಾಗಿರುವನು>> ಎಂದು ಹೇಳಿ ಹೋದನು.
13
ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವನಿಗೆ, <<ನೀನು ನನ್ನನ್ನು ನೋಡುವ ದೇವರು>> ಎಂದು ಹೆಸರಿಟ್ಟಳು: ಏಕೆಂದರೆ, <<
ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ>> ಎಂದುಕೊಂಡಳು.
14
ಈ ಸಂಗತಿಯಿಂದ ಅಲ್ಲಿರುವ ಬಾವಿಗೆ <<
ಬೆರ್ ಲಹೈರೋಯಿ>> ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ.
15
ಹಾಗರಳು ಅಬ್ರಾಮನಿಂದ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು.
16
ಹಾಗರಳು ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರ್ಷದವನಾಗಿದ್ದನು.