ಅದ್ಯಾಯ 8

ಲೇವಿಯರ ಯಾಜಕತ್ವವು ಮುಂದೆ ಬರಬೇಕಾದದ್ದನ್ನು ಸೂಚಿಸುವುದರ ನೆರಳಾಗಿರುವುದರಿಂದ ತಾತ್ಕಾಲಿಕವಾದದ್ದು; ಯೇಸುವಿನ ಯಾಜಕತ್ವವು ಶಾಶ್ವತವಾದದ್ದು 1 ಈಗ ಹೇಳುವ ಸಂಗತಿಗಳಲ್ಲಿ ಸಾರವೇನಂದರೆ – ಪರಲೋಕದೊಳಗೆ ಮಹೋನ್ನತನ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾದಂಥ ಮಹಾಯಾಜಕನು ನಮಗಿದ್ದಾನೆ. 2 ಪವಿತ್ರ ಸ್ಥಾನದಲ್ಲಿ ಮನುಷ್ಯರಿಂದಲ್ಲ, ಕರ್ತನೇ ಹಾಕಿದ ನಿಜವಾದ ದೇವದರ್ಶನ ಗುಡಾರದಲ್ಲಿ ಯಾಜಕೋದ್ಯೋಗ ನಡಿಸುವವನಾಗಿದ್ದಾನೆ. 3 ಮಹಾಯಾಜಕನು ಕಾಣಿಕೆಗಳನ್ನೂ, ಯಜ್ಞಗಳನ್ನೂ ಸಮರ್ಪಿಸುವುದಕ್ಕೆ ನೇಮಕವಾಗಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ಈತನಿಗೂ ಸಹ ಏನಾದರೂ ಇರುವುದು ಅಗತ್ಯವಾಗಿದೆ. 4 ಇನ್ನೂ ಭೂಮಿಯ ಮೇಲೆ ಇದ್ದಿದ್ದರೆ ಯಾಜಕನಾಗುತ್ತಿರಲಿಲ್ಲ. ಯಾಕೆಂದರೆ ಧರ್ಮಶಾಸ್ತ್ರದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದಾರಲ್ಲಾ. 5 ಗುಡಾರವನ್ನು ಕಟ್ಟುವುದಕ್ಕಿದ್ದಾಗ, << <ನೋಡು,> ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇಕು,>> ಎಂದು ದೇವರಿಂದ ಎಚ್ಚರಿಸಲ್ಪಟ್ಟಂತೆಯೇ ಪರಲೋಕದಲ್ಲಿರುವವುಗಳ ಪ್ರತಿರೂಪವೂ, ಛಾಯೆಯೂ, ಆಗಿರುವಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. 6 ಯೇಸು ಕ್ರಿಸ್ತನು ಅದಕ್ಕಿಂತ ಈಗ ಶ್ರೇಷ್ಠವಾದ ಉತ್ತಮ ಸೇವೆಯನ್ನು ಹೊಂದಿದವನಾಗಿದ್ದಾನೆ ಯಾಕೆಂದರೆ ಈತನು ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಉತ್ತಮವಾದ ಒಡಂಬಡಿಕೆಗೆ ಸಹ ಮಧ್ಯಸ್ಥನಾಗಿದ್ದಾನೆ. 7 ಮೊದಲನೆಯ ಒಡಂಬಡಿಕೆಯು ದೋಷವಿಲ್ಲದ್ದಾಗಿದ್ದರೆ, ಎರಡನೆಯ ಒಡಂಬಡಿಕೆಯ ಅಗತ್ಯವಿರುತ್ತಿರಲಿಲ್ಲ. 8 ದೇವರು ಆ ಜನರಲ್ಲಿ ತಪ್ಪು ಹೊರಿಸಿ ಹೀಗೆಂದನು, – << <ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು> ಎಂದು ಕರ್ತನು ಹೇಳುತ್ತಾನೆ. 9 ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತ ದೇಶದೊಳಗಿನಿಂದ ಕರದುಕೊಂಡು ಬಂದ ದಿನದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯ ಹಾಗಲ್ಲ. ಏಕೆಂದರೆ ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲವಾದ್ದರಿಂದ ನಾನು ಅವರನ್ನು ಲಕ್ಷಿಸಲಿಲ್ಲ> ಎಂದು ಕರ್ತನು ಹೇಳುತ್ತಾನೆ. 10 ದಿನಗಳ ತರುವಾಯ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು> ಹೀಗಿರುವುದು, - <ನಾನು ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು. ನಾನು ಅವರ ಹೃದಯಗಳ ಮೇಲೆ ಅವುಗಳನ್ನು ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಜನರಾಗಿರುವರು. 11 ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ <<ಕರ್ತನನ್ನು ತಿಳಿದುಕೊಳ್ಳಿರಿ>> ಎಂದು ಬೋಧಿಸಬೇಕಾಗಿರುವುದಿಲ್ಲ. ಏಕೆಂದರೆ ಹೀನರಾದವರು ಮೊದಲುಗೊಂಡು ಉನ್ನತರಾದವರ ತನಕ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು. 12 ಅವರ ದುಷ್ಕೃತ್ಯಗಳನ್ನು ಕರುಣೆಯಿಂದ ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ> >> ಎಂದು ಕರ್ತನು ನುಡಿಯುತ್ತಾನೆ. 13 <<ಹೊಸತು>> ಎಂದು ಹೇಳಿದ್ದರಲ್ಲಿ ಮೊದಲಿದ್ದ ಒಡಂಬಡಿಕೆಯನ್ನು ಹಳೆಯದಾಗಿ ಮಾಡಿದ್ದಾನೆ. ಅದು ಹಳೆಯದಾಗುತ್ತಾ ಅಳಿದುಹೋಗುವುದಕ್ಕೆ ಸಮೀಪವಾಗಿದೆ.